ಭಟ್ಟ, ಪ ಸು
	1931-81. ಸಾಹಿತಿ, ಪತ್ರಿಕೋದ್ಯಮಿ ಪೂರ್ಣ ಹೆಸರು ಪರಮೇಶ್ವರ ಸುಬ್ರಾಯ ಭಟ್ಟ. ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನ ಹೊಲನಗದ್ದೆ ಗ್ರಾಮದಲ್ಲಿ 1931 ಜೂನ್ 3ರಂದು ಜನನ. ತಂದೆ ಸುಬ್ರಾಯ ಭಟ್ಟ, ತಾಯಿ ಸರಸ್ವತಿ. ತಾಯಿ ಹೇಳುತ್ತಿದ್ದ ಗೋವಿನ ಹಾಡು ಕಥೆ, ಮತ್ತು ಯಕ್ಷಗಾನ ಪ್ರಸಂಗಗಳು ಚಿಕ್ಕಂದಿನಲ್ಲಿ ಭಟ್ಟರ ಮೇಲೆ ಪ್ರಭಾವ ಬೀರಿದುವು.

	ಶಿರಸಿಯಲ್ಲಿ ಪ್ರೌಢಶಾಲೆ ಮತ್ತು ಶಿವಮೊಗ್ಗೆಯಲ್ಲಿ ಕಾಲೇಜು ವ್ಯಾಸಂಗ ನಡೆಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿಗಳಿಸಿದರು. ಸಾಹಿತ್ಯದಲ್ಲಿ ಆಸಕ್ತರಾದ ಭಟ್ಟರಿಗೆ ಇಂಟರ್‍ಮೀಡಿಯೆಟಿನಲ್ಲಿ ಹಾ.ಮಾ. ನಾಯಕ, ಯು.ಆರ್.ಅನಂತಮೂರ್ತಿಯವರ ಸಾಹಚರ್ಯ ಮತ್ತು ಎಸ್.ವಿ. ಪರಮೇಶ್ವರಭಟ್ಟರ ಮಾರ್ಗದರ್ಶನ ಧಾರವಾಡದಲ್ಲಿ ವಿ.ಕೃ.ಗೋಕಾಕ ಹಾಗೂ ಸ.ಸ.ಮಾಳವಾಡರ ಪ್ರೋತ್ಸಾಹ ದೊರಕಿದುವು.

	ಹದಿನೇಳನೆಯ ವಯಸ್ಸಿನಲ್ಲಿ (1948) ಭಟ್ಟರು ಉತ್ತರ ಕನ್ನಡ ಜಿಲ್ಲೆಯ ಜನಜೀವನಕ್ಕೆ ಸಂಬಂಧಪಟ್ಟ ಕತೆಗಳನ್ನೊಳಗೊಂಡ ಪಡುವಣ ಎಂಬ ಕಥಾಸಂಕಲನ ಹೊರತಂದರು. ಈ ಸಾಹಿತ್ಯ ಕೃಷಿ ಅವರ ಬದುಕಿನುದ್ದಕ್ಕೂ ಮುಂದುವರಿಯಿತು. ಹಕ್ಕಿನ ಹೋರಾಟ ಇವರ ಎರಡನೆಯ ಕಥಾಸಂಕಲನ, 1948ರಿಂದ 1969ರ ತನಕ ಬರೆದ ಕಥೆಗಳ ಸಂಕಲನ ಅಂಗೇಲಾ. ಇವರ ಮೊದಲ ಕಾದಂಬರಿ. ಚಾರುಬಂಡೆ ವೇಶ್ಯಾಜೀವನದ ಸಮಸ್ಯೆಗಳನ್ನೊಳಗೊಂಡ ಕಾದಂಬರಿ ಸಂಕ್ರಮಣ ಪ್ರಕಟವಾದದ್ದು 1970ರಲ್ಲಿ. ಆತ್ಮಾರ್ಪಣೆ ಎಂಬ ಕಾದಂಬರಿಗೆ (1966) ಭಗತ್‍ಸಿಂಗ್‍ರ ಆತ್ಮಾರ್ಪಣೆಯೆ ಮೂಲ. 'ಕಪ್ಪು ಚಿರತೆ ಇವರ ಮರಣದ ಅನಂತರ ಪ್ರಕಟಗೊಂಡ ಕಾದಂಬರಿ. ಕಿಷನ್‍ಚಂದರ್ ಅವರ ಏಕ್ ಔರತ್ ಔರ್ ಹಜಾರ್ ದಿವಾನೆ ಎಂಬ ಕಾದಂಬರಿಯನ್ನು ಸಾವಿರ ಪ್ರಣಯಿಗಳು ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ಗಾಂಧೀಜಿಯವರನ್ನು ಕುರಿತು ಕನ್ನಡ ಕವಿಗಳು ಬರೆದ ಕವಿತೆಗಳು ಸಂಗ್ರಹವಾದ ಅಮರನಾದೈತಂದೆ ಮತ್ತು ಸೌಭಾಗ್ಯ ಇವರಿಂದ ಸಂಪಾದನೆಗೊಂಡ ಕೃತಿಗಳು. ಜಾನ್ ಕೆನಡಿ (ಜೀವನ ಚರಿತ್ರೆ), ವೀಣೆ ನುಡಿಯಿತು (ನೀಳ್ಗತೆ), ಮಾತನಾಡಿದ ಗಿಣಿ (ಮಕ್ಕಳ ಕತೆ), ಸಹಕಾರ ಚಳವಳಿ ಮತ್ತು ಸಹಕಾರೀ ಗೃಹನಿರ್ಮಾಣ ಸಂಘಗಳು (ಪ್ರಬಂಧ) ಇವುಗಳಲ್ಲದೆ ಕನ್ನಡ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.

	ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದ ಭಟ್ಟರಿಗೆ ಪತ್ರಿಕೋದ್ಯಮ ವಿಶೇಷ ಆಸಕ್ತಿಯ ಕ್ಷೇತ್ರವಾಗಿತ್ತು. ಇವರು ಜ್ಞಾನಗಂಗೋತ್ರಿಯ (ಕಿರಿಯರ ವಿಶ್ವಕೋಶ) ಏಳು ಸಂಪುಟಗಳ ವ್ಯವಸ್ಥಾಪಕ ಸಂಪಾದಕರಾಗಿದ್ದರು. ಶಿರಸಿ ಸಮಾಚಾರ ವಾರಪತ್ರಿಕೆಯ ಸಂಸ್ಥಾಪಕರಲ್ಲೊಬ್ಬರು. ಸಮನ್ವಯ ಸಾಪ್ತಾಹಿಕವನ್ನೂ ಸೌರಭ ಮಾಸಪತ್ರಿಕೆಯನ್ನೂ ಸ್ವಂತವಾಗಿ ಪ್ರಕಟಿಸಿದರು. ಕಸ್ತೂರಿ, ಸಂಯುಕ್ತ ಕರ್ನಾಟಕ ಮತ್ತು ಪ್ರಜಾಪ್ರಭುತ್ವ ಪತ್ರಿಕೆಗಳ ಸಂಪಾದಕರಾಗಿದ್ದರು. ರಾಜ್ಯ ಪಿ.ಯು.ಸಿ. ಮಂಡಳಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕದ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಉಪಾಧ್ಯಾಯರಾಗಿ ಶಿಕ್ಷಣಕ್ಷೇತ್ರದಲ್ಲಿಯೂ ಕೆಲವು ಬ್ಯಾಂಕುಗಳ ನಿರ್ದೇಶಕರಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ವಿವಿಧ ಸಹಕಾರಿ ಸಂಘಸಂಸ್ಥೆಗಳಲ್ಲಿ ಕಾರ್ಯದರ್ಶಿ, ಅಧ್ಯಕ್ಷ ಮುಂತಾದ ಮಟ್ಟದಲ್ಲಿ ಸೇವೆಸಲ್ಲಿಸಿದರು.  ಭಟ್ಟರು 1981 ಜೂನ್ 24ರಂದು ಚಿತ್ರದುರ್ಗದ ಬಳಿ ಬಸ್ ಅಪಘಾತದಲ್ಲಿ ನಿಧನರಾದರು.			
(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ